ಜಯದೇವ 2

	ಸು. 1200 ಸಂಸ್ಕøತ ಅಲಂಕಾರಿಕ, ನಾಟಕಕಾರ, ಪ್ರಸನ್ನ ರಾಘವ ಎಂಬ ನಾಟಕವನ್ನೂ ಚಂದ್ರಾಲೋಕ ಎಂಬ ಅಲಂಕಾರ ಗ್ರಂಥವನ್ನೂ ಬರೆದವ. ಈತ ವಿದರ್ಭದೇಶದವ. ಬ್ರಾಹ್ಮಣ. ಮಹಾದೇವ, ಸುಮಿತ್ರೆ ಈತನ ತಂದೆತಾಯಿಗಳು ತನ್ನ ನಾಟಕದ ಪ್ರಸ್ತಾವನೆಯಲ್ಲಿ ಭಾಸ, ಕಾಳಿದಾಸ, ಬಾಣ ಮತ್ತು ಮಯೂರ ಇವರನ್ನು ಪ್ರಶಂಸಿಸಿದ್ದಾನೆ. ಈ ನಾಟಕದ ಕೆಲವು ಪದ್ಯಗಳನ್ನು 13ನೆಯ ಶತಮಾನದಲ್ಲಿದ್ದ ಜಲ್ಹಣ ತನ್ನ ಸೂಕ್ತಿಮುಕ್ತಾವಳಿಯಲ್ಲಿ ಉದ್ಧರಿಸಿದ್ದಾನೆ. ಭೋಜ ಈ ನಾಟಕದ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲವಾದ್ದರಿಂದ ಈತ 12ನೆಯ ಶತಮಾನದಲ್ಲಿದ್ದಿರಬೇಕೆಂದು ಕೃಷ್ಣಮಾಚಾರ್ಯರ ಅಭಿಮತ.

	ಪ್ರಸನ್ನರಾಘವ: ಏಳು ಅಂಕಗಳ ಈ ನಾಟಕದಲ್ಲಿ ಸೀತಾಸ್ವಯಂವರದಿಂದ ಹಿಡಿದು ರಾಮ ಅಯೋಧ್ಯೆಗೆ ಹಿಂತಿರುಗುವವರೆಗಿನ ರಾಮಾಯಣದ ಕಥೆ ಪ್ರತಿಪಾದಿತವಾಗಿದೆ. ನಾಟಕಕ್ಕೆ ವಿಶೇಷವಾದ ಕಳೆಯನ್ನು ತರಲಿಕ್ಕಾಗಿ ಕವಿ ಮೂಲಕಥೆಯಲ್ಲಿ ಕೆಲವು ಸಮುಚಿತವಾದ ಬದಲಾವಣೆಗಳನ್ನು ಮಾಡಿಕೊಂಡಿದ್ದಾನೆ. ಶ್ರೀರಾಮ ಸೀತಾಲಕ್ಷ್ಮಣರೊಡನೆ ಪುಷ್ಟಕವಿಮಾನವನ್ನೇರಿ ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಿಕ್ತನಾದ ವಿಚಾರದೊಡನೆ ನಾಟಕ ಕೊನೆಗೊಂಡಿದೆ. ನಾಟಕದಲ್ಲಿ ರಾಮನ ವನವಾಸ, ಯುದ್ಧ, ಚಂದ್ರೋದಯ, ಅಯೋಧ್ಯೆಯ ದಾರಿ ಇವುಗಳ ದೀರ್ಘವರ್ಣನೆಗಳು ಬಂದಿವೆ. ಒಟ್ಟು 392 ಪದ್ಯಗಳಿವೆ.

	ಪಾತ್ರಗಳ ನಡೆನುಡಿಗಳಲ್ಲಿ ಕವಿ ತೋರಿಸಿರುವ ಸಣ್ಣ ದೊಡ್ಡ ಚಮತ್ಕಾರಗಳೇ ಈ ನಾಟಕದಲ್ಲಿರುವ ವೈಶಿಷ್ಟ್ಯ. ನಾಟಕದ ಹೆಸರನ್ನು ಹೇಳುವುದರಲ್ಲಿಯೂ ಇದನ್ನು ಕಾಣಬಹುದು.

	ಪ್ರತ್ಯಂಕಮಂಕುರಿತ ಸರ್ವರಸಾವತಾರ |
	ನ್ನವ್ಯೋಲ್ಲಸತ್ಕುಸುಮ ರಾಜಿವಿರಾಜಿಬಂಧಂ ||
	ಘರ್ಮೇತರಾಂಶುರಿವ ವಕ್ರತಯಾತಿರಮ್ಯಂ |
	ನಾಟ್ಯಪ್ರಬಂಧಮತಿಮಂಜುಲಸಂವಿಧಾನಂ ||

	ಮೇಲಿನ ಶ್ಲೋಕದಲ್ಲಿರುವ ದಪ್ಪ ಅಕ್ಷರಗಳನ್ನು ಜೋಡಿಸಿದರೆ ನಾಟಕದ ಹೆಸರು ಬರುತ್ತದೆ. ಕವಿ ಪ್ರತಿಭಾ ಸಂಪನ್ನನೂ ಕವಿತಾನಿಪುಣನೂ ಕಲ್ಪನಾಚತುರನೂ ಆಗಿದ್ದಾನೆ. ಶೈಲಿ ರಮಣೀಯವೂ ಹೃದಯಂಗಮವೂ ಆಗಿದೆ. ವರ್ಣನೆಗಳೂ ಸ್ವಾಭಾವಿಕವಾಗಿವೆ. ಮನೋಹರವಾದ ಕವಿತೆಯಿಂದ ಕೂಡಿ ನಾಟಕ ಇಂಪಾಗಿದೆ.

	ಚಂದ್ರಾಲೋಕ: ಈ ಅಲಂಕಾರ ಗ್ರಂಥದಲ್ಲಿ ಅನುಷ್ಟುಬ್ ಛಂದಸ್ಸಿನಲ್ಲಿ ರಚಿತವಾಗಿರುವ 350 ಪದ್ಯಗಳಿವೆ. ವಾಗ್‍ವಿಕಾರ, ದೋಷ, ನಿರೂಪಣ, ಲಕ್ಷಣ ನಿರೂಪಣ, ಗುಣ ನಿರೂಪಣ, ಅಲಂಕಾರ ನಿರೂಪಣ, ರಸಾದಿ ನಿರೂಪಣ, ಧ್ವನಿ ನಿರೂಪಣ, ಗುಣೀಭೂತವ್ಯಂಗ್ಯ, ಲಕ್ಷಣ ನಿರೂಪಣ, ಅಭಿದಾ ನಿರೂಪಣ-ಎಂಬುವು ಇಲ್ಲಿನ ಹತ್ತು ಅಧ್ಯಾಯಗಳು. ಇದರಲ್ಲಿ 5ನೆಯ ಅಧ್ಯಾಯದಲ್ಲಿ ಬರುವ ಅರ್ಥಾಲಂಕಾರ ಪ್ರಕರಣ ಬಹುಮುಖ್ಯವಾದದ್ದು. ಈತ ಅಲಂಕಾರಗಳನ್ನು ಲಕ್ಷಣ ಲಕ್ಷ್ಯಗಳೊಡನೆ ತಿಳಿಸಿರುತ್ತಾನೆ. ಈತನಂತೆ ಅಲಂಕಾರ ಲಕ್ಷಣಗಳನ್ನಾಗಲಿ ಸಮಂಜಸ ಉದಾಹರಣೆಗಳನ್ನಾಗಲಿ ಬೇರೆ ಯಾವ ಆಲಂಕಾರಿಕರೂ ಹೇಳಿಲ್ಲ. ಉದ್ದಾಮ ಪಂಡಿತನೆನಿಸಿದ ಅಪ್ಪಯ್ಯ ದೀಕ್ಷಿತ ಚಂದ್ರಾಲೋಕಕ್ಕೆ ಕುವಲಯಾನಂದ ಎಂಬ ವ್ಯಾಖ್ಯಾನ ಗ್ರಂಥವನ್ನು ರಚಿಸಿದ್ದಾನೆ. ಅನೇಕರು ಅಲಂಕಾರಗಳಲ್ಲಿ ಜಯದೇವ ಹೇಳಿರುವ ಲಕ್ಷಣಗಳನ್ನು ಪ್ರಮಾಣವಾಗಿ ಸ್ವೀಕರಿಸಿದ್ದಾರೆ.
(ಟಿ.ಜಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ